ಬೆಂಗಳೂರು: ಕೊರೊನಾ ಎರಡನೇ ಅಲೆ ಹೊಡೆತಕ್ಕೆ ಸಿಲುಗಿರುವ ಕರ್ನಾಟಕದ ಪಾಲಿಗೆ ಹೊಸ ಆಶಾಕಿರಣವೊಂದು 2ಡಿಜಿ ಔಷಧದ ರೂಪದಲ್ಲಿ ಸಿಕ್ಕಿದೆ. ಡಿಆರ್ಡಿಓ, ರೆಡ್ಡೀಸ್ ಲ್ಯಾಬ್ಸ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿರುವ 2ಡಿಜಿ ಔಷಧವನ್ನು ರಾಜ್ಯದಲ್ಲಿ ಮೂರು ಕೊರೊನಾ ಸೋಂಕಿತರ ಮೇಲೆ ಪ್ರಯೋಗಿಸಲಾಗಿದ್ದು, ಮೂರಕ್ಕೆ ಮೂರು ಜನರೂ ಗುಣಮುಖರಾಗಿರುವುದು ದೊಡ್ಡ ಮಟ್ಟದ ಭರವಸೆ ಮೂಡಿಸಿದೆ. ಬಹುಮುಖ್ಯವಾಗಿ ಈ ಮೂವರು ಸೋಂಕಿತರೂ ಗಂಭೀರಾವಸ್ಥೆಗೆ ತಲುಪಿದವರಾಗಿದ್ದು, 2ಡಿಜಿ ಪ್ರಯೋಗದ ನಂತರ ಸಂಪೂರ್ಣ ಚೇತರಿಕೆ ಕಂಡಿರುವುದು ವೈದ್ಯಕೀಯ ವಲಯದಲ್ಲಿ 2ಡಿಜಿ ಬಗ್ಗೆ ಭಾರೀ ನಿರೀಕ್ಷೆ ಮೂಡಿಸಲು ಕಾರಣವಾಗಿದೆ.
ಬೆಂಗಳೂರಿನ ಮಣಿಪಾಲ ಮತ್ತು ನಾರಾಯಣ ಹೆಲ್ತ್ ಆಸ್ಪತ್ರೆಗಳಲ್ಲಿ ಒಟ್ಟು ಮೂವರು ಕೊರೊನಾ ಸೋಂಕಿತರ ಮೇಲೆ 2ಡಿಜಿ ಪ್ರಯೋಗ ಮಾಡಲಾಗಿದ್ದು ಅವರೆಲ್ಲರೂ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಈ ಪೈಕಿ 45 ಹಾಗೂ 66 ವರ್ಷದ ಇಬ್ಬರಿದ್ದು ಅವರು ವೆಂಟಿಲೇಟರ್ ಸಹಾಯ ಪಡೆದ ಸೋಂಕಿತರಾಗಿದ್ದರು ಎನ್ನುವುದು ಗಮನಾರ್ಹವಾಗಿದೆ. 45 ವರ್ಷದ ಸೋಂಕಿತ ಮಹಿಳೆ ಸಂಪೂರ್ಣ ಗುಣಮುಖರಾಗಿದ್ದರೆ, 66 ವರ್ಷದ ವ್ಯಕ್ತಿ ಐಸಿಯುನಿಂದ ಸಾಮಾನ್ಯ ವಾರ್ಡ್ಗೆ ಶಿಫ್ಟ್ ಆಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.






0 Comments