ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2016ರಲ್ಲಿ 500 ಹಾಗೂ 1000 ರೂಪಾಯಿ ನೋಟು ನಿಷೇಧಿಸಿತು. ಆದರೂ ಭಾರತದ ಅರ್ಥ ವ್ಯವಸ್ಥೆಯನ್ನು ನಕಲಿ ನೋಟುಗಳು ಚುಚ್ಚುತ್ತಲೇ ಇವೆ. ನೋಟು ನಿಷೇಧವಾಗಿ ನಾಲ್ಕು ವರ್ಷ ಮುಗಿದು, ನೋಟುಗಳಿಗೆ ಭದ್ರತಾ ಫೀಚರ್ಗಳನ್ನು ಸೇರ್ಪಡೆ ಮಾಡಿದ ಮೇಲೂ ನಕಲಿ ನೋಟುಗಳು ಸಮಸ್ಯೆ ಮಾಡುತ್ತಲೇ ಇವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಚಿನ ವಾರ್ಷಿಕ ವರದಿಯಲ್ಲಿನ ಮಾಹಿತಿ ಪ್ರಕಾರ, ಒಟ್ಟಾರೆಯಾಗಿ, ಕಳೆದ ಒಂದು ವರ್ಷದಲ್ಲಿ ನಕಲಿ ನೋಟುಗಳ ಚಲಾವಣೆಯಲ್ಲಿ ಶೇ 29.7ರಷ್ಟು ಇಳಿಕೆ ಆಗಿದೆ. ಆದರೆ ಅದೇ ಸಮಯದಲ್ಲಿ 500 ರೂಪಾಯಿಗಳ ನಕಲಿ ನೋಟಿನ ಪ್ರಮಾಣ ಭಾರತದಲ್ಲಿ ಶೇ 31ರಷ್ಟು ಹೆಚ್ಚಳವಾಗಿದೆ. ವ್ಯವಸ್ಥೆ ಅಡಿ ಕಂಡುಹಿಡಿದ ಒಟ್ಟು ನಕಲಿ ಕರೆನ್ಸಿ ನೋಟಿನಲ್ಲಿ ಶೇ 3.9ರಷ್ಟನ್ನು ಕೇಂದ್ರೀಯ ಬ್ಯಾಂಕ್ ಕಂಡುಹಿಡಿದ್ದರೆ, ಇತರ ಬ್ಯಾಂಕ್ಗಳು ಶೇ 96.1ರಷ್ಟು ಕಂಡುಹಿಡಿದಿವೆ. ಇದರಲ್ಲಿ ಸಾರ್ವಜನಿಕ, ಖಾಸಗಿ ಹಾಗೂ ಕೋ ಆಪರೇಟಿವ್ ಬ್ಯಾಂಕ್ ಎಲ್ಲವೂ ಸೇರಿದೆ.
ಇತರ ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆಯಲ್ಲಿ ಇಳಿಕೆ ಆಗಿದೆ. ಆರ್ಬಿಐ ಬಿಡುಗಡೆ ಮಾಡಿದ ವರದಿಯಲ್ಲಿ ಪೊಲೀಸರು ಹಾಗೂ ಇತರ ಕಾನೂನು ಜಾರಿ ಸಂಸ್ಥೆಗಳು ವಶಪಡಿಸಿಕೊಂಡ ನಕಲಿ ನೋಟುಗಳ ಬಗ್ಗೆ ಮಾಹಿತಿಯು ಆರ್ಬಿಐ ಬಿಡುಗಡೆ ಮಾಡಿದ ವರದಿಯಲ್ಲಿ ಇಲ್ಲ. ರಾಷ್ಟ್ರೀಯ ಅಪರಾಧ ದಾಖಲಾತಿ ದಳ (NCRB) ಮಾಹಿತಿ ಪ್ರಕಾರ, 2019ರಲ್ಲಿ ಫೇಕ್ ಇಂಡಿಯನ್ ಕರೆನ್ಸಿ ನೋಟ್ಸ್ (ಎಫ್ಐಸಿಎನ್) ನಕಲಿ ನೋಟುಗಳ ಸಂಖ್ಯೆ 2,87,404 ಸಿಕ್ಕಿದ್ದು, 25.3 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಅದರ ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಶೇ 11.7ರಷ್ಟು ಹೆಚ್ಚಳ ಆಗಿದೆ. ಕಳೆದ ತಿಂಗಳೊಂದರಲ್ಲೇ ಕೊಚ್ಚಿಯಲ್ಲಿ ಪೊಲೀಸರು 1.8 ಕೋಟಿ ಮೌಲ್ಯದ ನಕಲಿ ಕರೆನ್ಸಿ, ಅಸ್ಸಾಂನ ದಿಬ್ರುಗಢದಲ್ಲಿ 26 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಯಿತು.





0 Comments