ದೆಹಲಿ: ಕೊರೊನಾ ಎರಡನೇ ಅಲೆಯಿಂದಾಗಿ ಬಚಾವಾಗಲು ಇರುವ ಒಂದೇ ಒಂದು ದಾರಿ ಅಂದರೆ ಅದು ಲಸಿಕೆ ಹಾಕಿಸಿಕೊಳ್ಳುವುದು. ಆದರೆ ಲಸಿಕೆ ಕೊರತೆಯಿಂದಾಗಿ ದೇಶದಲ್ಲಿ ಲಸಿಕೆ ಕಾರ್ಯಕ್ರಮ ನಿರೀಕ್ಷಿತ ಮಟ್ಟದಲ್ಲಿ ಆಗಿರಲಿಲ್ಲ. ಅಲ್ಲದೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಬಗ್ಗೆ ಘೋಷಣೆ ಮಾಡುತ್ತಿದ್ದಂತೆ, ವ್ಯಾಕ್ಸಿನೇಷನ್ ಬಗ್ಗೆ ಗೊಂದಲವೇರ್ಪಟ್ಟಿತ್ತು. ಇದೀಗ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
18 ರಿಂದ 44 ವರ್ಷದವರಿಗೆ ಲಸಿಕೆ ನೀಡುವ ಅಭಿಯಾನ ಅರಂಭವಾಗಿದೆ. ಅನೇಕ ರಾಜ್ಯಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಅದರಂತೆ ಲಸಿಕೆ ಹಾಕಿಸಿಕೊಳ್ಳಲು ಕೊವಿನ್ ಆಪ್ನಲ್ಲಿ ನೊಂದಣಿ ಮಾಡಿಸಬೇಕಿತ್ತು. ಆದರೆ, ಈಗ ಲಸಿಕಾ ಕೇಂದ್ರದಲ್ಲೇ ನೊಂದಣಿ ಮಾಡುವ ನಿಯಮ ತರಲಾಗಿದೆ. ಲಸಿಕೆ ಹಾಕಿಸಿಕೊಳ್ಳಲು ಅನುಕೂಲವಾಗುವಂತೆ ಲಸಿಕಾ ಕೇಂದ್ರದಲ್ಲೇ ಕೊವಿನ್ ಆ್ಯಪ್‌ನಲ್ಲಿ ನೇರ ನೋಂದಣಿ ಮತ್ತು ಅಪಾಯಿಂಟ್ಮೆಂಟ್ ಪಡೆಯುವ ನಿಯಮವನ್ನು ಸಡಿಲಗೊಳಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಆದರೆ, ಈ ಹೊಸ ನಿಯಮ ಕೇವಲ ಸರ್ಕಾರಿ ಕೊವಿಡ್ ಲಸಿಕಾ ಕೇಂದ್ರಗಳಲ್ಲಿ ಮಾತ್ರ ಜಾರಿಗೊಳಿಸಲಾಗಿದೆ. ಖಾಸಗಿ ಸಿವಿಸಿಗಳಿಗೆ ಲಭ್ಯವಿರುವುದಿಲ್ಲ ಮತ್ತು ಅವರು ತಮ್ಮ ಲಸಿಕಾ ವೇಳಾಪಟ್ಟಿಗಳನ್ನು ಆನ್‌ಲೈನ್ಅ ಪಾಯಿಂಟ್ಮೆಂಟ್‌ಗಳಿಗಾಗಿ ಸ್ಲಾಟ್‌ಗಳೊಂದಿಗೆ ಪ್ರತ್ಯೇಕವಾಗಿ ಪ್ರಕಟಿಸಬೇಕಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. ಸ್ಥಳೀಯ ಸನ್ನಿವೇಶದ ಆಧಾರದ ಮೇಲೆ 18ರಿಂದ44 ವರ್ಷ ವಯಸ್ಸಿನವರಿಗೆ ಆನ್-ಸೈಟ್ ನೋಂದಣಿ ಮತ್ತು ಅಪಾಯಿಂಟ್ಮೆಂಟ್ ನೀಡುವ ಬಗ್ಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ನಿರ್ಧರಿಸಬೇಕು ಎಂದು ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.





0 Comments